ಬೆಂಗಳೂರು
ಬೆಂಗಳೂರು, ನಿನ್ನ ಪ್ರೀತಿಸುವ ಪ್ರತಿ ಪ್ರಯತ್ನದಲ್ಲಿಯೂ ನಾ ಸೋತಿರುವೆ.
ನಿನ್ನ ಸಂಪೂರ್ಣವಾಗಿ ಬಿಟ್ಟು ಹೋಗುವ ಘಳಿಗೆಗಾಗಿ, ನಾ ಕಾದಿರುವೆ.
ಕಾರ್ಪಣ್ಯ, ಕಟ್ಟುಪಾಡುಗಳ ಮೀರಿ ನಾ ಈವರೆಗೂ ಬೆಳೆದಿರುವೆ.
ಆದರೂ, ಅದೇಕೊ ಬದುಕಿನ ಈ ಪುಟದಲ್ಲಿ ನಾ ಸತ್ತಿರುವೆ.
ನೀ ಈ ಬಾಳಲ್ಲಿ ಬೇಡವಾದ ಇರುಳಾಗಿ ಬಂದೆ,
ನಾನೆಂದೂ ನೋಡಿರದ ಕತ್ತಲೆಯ ತಂದೆ.
ನೀ ತಂದ ಕಡುಗತ್ತಲೆಯ ಧಾರುಣಕ್ಕೆ
ನಾ ಮುನ್ನುಗ್ಗದೆ ಅಲ್ಲಿಯೇ ನಿಂದೆ.
ನನ್ನೊಡಲ ಮಾತುಗಳು ನಾ ಯಾರ ಬಳಿಯೂ ಹೇಳಲಾರೆ.
ಪುಟಗಳಲ್ಲಿ ಅಚ್ಚಾಗಿ, ಕಾಲಕ್ರಮೇಣ ಕೊಳಿಯಲೂ ಬಿಡಲಾರೆ.
ನನ್ನ ಹೊಕ್ಕುತಿರುವ ಈ ಭಾವ ಸುರುಳಿಯ ನಾ ತಾಳಲಾರೆ.
ನಿನ್ನಿಂದ ಮುಕ್ತಿಯ ಹೊರತಾಗಿ ಮತ್ತೇನೂ ನಾ ಬೇಡಲಾರೆ.
ಮನದ ಕುಹಕ ಮಾತಾಗಿ ಬಂದಾಗ ನಾಲಿಗೆ ಹೊರಡದಾಗಿದೆ.
ಹೇಳಿಯೂ ಪ್ರಯೋಜನವಿಲ್ಲವೆಂದು ಎನಗೂ ಅರಿವಾಗಿದೆ.
ಹೇಳುವ ಮನೆಗಳಿಗೆ, ಕೇಳುವ ಕಿವಿಗಳಿಲ್ಲದ ಈ ಊರು ಸಾಕಾಗಿದೆ.
ಬಯಸಿಯೂ ಹೋಗಲಾರೆ, ಬೆಂಗಳೂರಿನ ಅನಿವಾರ್ಯ ಸಾಂಗತ್ಯವೆನಗೆ ಮುಗಿಯದಾಗಿದೆ.